ತಂಬೂರಿಯವರು
ಕರ್ನಾಟಕದ ಜನಪದ ವೃತ್ತಿಗಾಯಕರಲ್ಲಿ ಒಬ್ಬರು. ಲೌಕಿಕ ವೃತ್ತಿಗಾಯಕರ ಗುಂಪಿಗೆ ಸೇರಿದವರು. ಇವರಿಗೆ ಯಾವುದೇ ಧಾರ್ಮಿಕ ವೃತ್ತಿಯೊಂದು ಇಲ್ಲದಿರುವುದರಿಂದ ಲೌಕಿಕ ಧಾರ್ಮಿಕವೆನ್ನದೆ ಎಲ್ಲವನ್ನೂ ಇವರು ಹಾಡಬಲ್ಲರು, ಹಾಡುತ್ತಾರೆ. ಹಾಸನ ಚಿಕ್ಕಮಗಳೂರು ಹಾಗೂ ಉತ್ತರ ಕೊಡಗಿನ ಸುತ್ತಮುತ್ತ ಇವರು ಕಾಣಸಿಗುತ್ತಾರೆ. 

ಮಂಟೇಸ್ವಾಮಿಯ `ಸಿಸು` ಮಕ್ಕಳಾದ ನೀಲಗಾರರಂತೆ ಇವರೂ ತಂಬೂರಿಯನ್ನೇ ತಮ್ಮ ವಾದ್ಯವನ್ನಾಗಿ ಬಳಸುತ್ತಾರಾದರೂ ವಾದ್ಯವಿಶೇಷದ ಏಕತೆಯಿಂದಲೇ ಈ ಎರಡು ಸಂಪ್ರದಾಯಗಳಿಗೂ ಒಂದೇ ಮೂಲವನ್ನು ಆರೋಪಿಸುವುದಕ್ಕಾಗುವುದಿಲ್ಲ. ನೀಲಗಾರ ಸಂಪ್ರದಾಯಕ್ಕೆ ಧಾರ್ಮಿಕ ಪರಿವೇಷವಿದೆ; ಶೂದ್ರವರ್ಗದ ಎಲ್ಲರೂ ನೀಲಗಾರರಾಗಿದ್ದಾರೆ; ನೀಲಗಾರರು ತಂಬೂರಿ ಜೊತೆಗೆ ಬಳಸುವ ಸಾಧನ ಗಗ್ಗರ; ನೀಲಗಾರರು ಹಾಡುವ ಪ್ರಧಾನ ಕಥೆಯಾದ ಧರೆಗೆ ದೊಡ್ಡವರ ವಚನ - ತಂಬೂರಿಯವರಿಗೆ ಅಪರಿಚಿತವಸ್ತು. ಈ ಕಾರಣಗಳಿಂದ ಲೌಕಿಕ ಆವರಣದ ತಂಬೂರಿಯವರನ್ನು ಧಾರ್ಮಿಕ ವೃತ್ತಿಗಾಯಕರಾದ ನೀಲಗಾರರ ಸಂಪ್ರದಾಯದೊಡನೆ ಸೇರಿಸುವುದು ಸಮಂಜಸವಲ್ಲ. 

ತಂಬೂರಿಯವರ ವಾದ್ಯ ತಂಬೂರಿ, ಜೊತೆಗೆ ಬಟ್ಟುತಾಲ ಹಾಗೂ ಗುಮ್ಮಿಗಳನ್ನು ಬಳಸುತ್ತಾರೆ. ತಂಬೂರಿಯನ್ನು ಕಣಿಗೆಲೆ, ಪಕ್ಷೆ, ಕೂಳಿ, ತೇಗ, ಹಲಸು ಮುಂತಾದ ಮರಗಳಲ್ಲಿ ಯಾವುದಾದರೂ ಒಂದರಿಂದ ಮಾಡಿಕೊಳ್ಳುತ್ತಾರೆ. ಸುಮಾರು ಮೂರೂವರೆ ಅಡಿ ಉದ್ದವಿರುವ ತಂಬೂರಿಯ ಮೇಲುಭಾಗದಲ್ಲಿ ನಾಗರಹಾವಿನ ಹೆಡೆಯ ಕೆತ್ತನೆ ಇರುತ್ತದೆ.  ಇರುವ ನಾಲ್ಕು ಉಕ್ಕಿನ ತಂತಿಗಳನ್ನು ಶ್ರುತಿ ಮಾಡಿಕೊಳ್ಳಲು ನಾಲ್ಕು ಬಿರಡೆಗಳಿರುತ್ತವೆ.

ನೀಲಗಾರರು ಬಳಸುವ ಢಕ್ಕೆಗೆ ಬದಲಾಗಿ ಇವರು ಗುಮಟೆ (ಗುಮ್ಮಿ) ಎಂಬ ಮಣ್ಣಿನ ಸಾಧನವನ್ನು ವಾದ್ಯವನ್ನಾಗಿ ಮಾಡಿಕೊಂಡಿದ್ದಾರೆ. ಸುಮಾರು ಎಂಟು ಅಂಗುಲ ವ್ಯಾಸವುಳ್ಳ ಬಾಯಿಯ, ಆಲಿಕೆಯಾಕಾರದ ಈ ಮಣ್ಣಿನ ಸಾಧನದ ಬಾಯಿಯನ್ನು ಆಡಿನ ಚರ್ಮದಿಂದ ಬಂಧಿಸಿರುತ್ತಾರೆ. ತಳಭಾಗವನ್ನು ಮುಚ್ಚಿರುವುದಿಲ್ಲ. ಬಾಯಿಗೆ ಬಂಧಿಸಿರುವ ಚರ್ಮವನ್ನು ಬಲಗೈಯಿಂದ ಬಡಿಯುತ್ತ ಎಡಗೈಯಲ್ಲಿ ತಳ ಭಾಗವನ್ನು ಮುಚ್ಚಿ ಬಿಟ್ಟು ಮಾಡುವುದರಿಂದ ವಾದ್ಯದ ಧ್ವನಿ ಬೇಕೆಂದ ಗತ್ತಿಗೆ ಹೊಂದಿಕೊಳ್ಳುತ್ತದೆ. ಈ ಎರಡು ವಾದ್ಯಗಳಿಗೆ ಬಟುತಾಳ ಪೂರಕವಾಗಿರುತ್ತದೆ.

ಲೌಕಿಕ ವೃತ್ತಿಗಾಯಕರಲ್ಲಿ ತಂಬೂರಿಯವರಿಗೆ ಶ್ರೇಷ್ಠ ಸಾಧನ ಲಭ್ಯವಾಗುವುದು ಅವರು ಹಾಡುವ ರಾಮಾಯಣ ಹಾಗೂ ಮಹಾಭಾರತಗಳಿಂದ, ಇವುಗಳಲ್ಲದೆ ಅವರು ಇಪ್ಪತ್ತಕ್ಕೂ ಮೀರಿ ಪೌರಾಣಿಕ, ಐತಿಹಾಸಿಕ ಹಾಗೂ ಇತರ ಕಾವ್ಯಗಳನ್ನೂ ಹಾಡುತ್ತಾರೆ. ಜನಪದ ಕಥೆಗಳನ್ನು ಕಾವ್ಯವನ್ನಾಗಿ ಮಾರ್ಪಡಿಸಿಕೊಂಡಿರುವುದೇ ಇವರ ಕಾವ್ಯಸಂಪತ್ತಿನ ಹೆಚ್ಚಳಕ್ಕೆ ಕಾರಣವಾಗಿದೆ. ಸತ್ಯಭೋಜರಾಜ, ಕಾಡುಸಿದ್ದಮ್ಮ, ಸರ್ಜಪ್ಪನಾಯಕ, ಲೋಹಿತಕುಮಾರ-ಬಸವಕುಮಾರ, ತಿರುಪತಿ ತಿಮ್ಮಪ್ಪ, ಅಂಜನಾದೇವಿ ಕಥೆ, ಲವಕುಶರ ಕಾಳಗ, ನಿರ್ವಾಣಸ್ವಾಮಿ ಕಥೆ, ಎಲ್ಲಮ್ಮನ ಕಥೆ, ಬಾಲನಾಗಮ್ಮ, ಅರಣ್ಯಕುಮಾರ, ಕೊಡಗಿನ ದೊರೆ, ಬಂಜೆ ಹೊನ್ನಮ್ಮ, ನಂಜುಂಡೇಶ್ವರ, ಬಿಸ್ಟಮ್ಮತಾಯಿ, ಭೂದೇವೀ - ಬಸವಣ್ಣ, ಭೂತಾಳಿ ಪಟ್ಟಣದ ಋಷಿ, ಬಾಣಂತಿ ಹಾಡು, ಗೊಲ್ಲರ ಹಾಡು, ರಾಮಾಯಣ, ಮಹಾಭಾರತ ಮುಂತಾದ ಕಾವ್ಯಗಳು ತಂಬೂರಿಯವರು ಕನ್ನಡ ಜನಪದ ಕಾವ್ಯಭಂಡಾರಕ್ಕೆ ಕೊಟ್ಟಿರುವ ಕೊಡುಗೆಗಳು. ಇವುಗಳ ಜೊತೆಗೆ ಕಥೆಯ ನಡುವೆ ಕೆಲವು ವಿನೋದ ಲಾವಣಿಗಳನ್ನೂ ಇವರು ಹಾಡುತ್ತಾರೆ.

ಎಲ್ಲ ವೃತ್ತಿಗಾಯಕರಲ್ಲಿ ಕಂಡುಬರುವ ವಚನ ಇವರಲ್ಲಿಯೂ ಕಂಡುಬಂದರು ಪದ್ಯ ಭಾಗಗಳಿಗೇ ಹೆಚ್ಚು ಪ್ರಾಚುರ್ಯವಿದೆ. ಇವರ ಎಲ್ಲ ಕಾವ್ಯಗಳೂ ರಗಳೆಯನ್ನು ಹೋಲುವ ಛಂದಸ್ಸಿನಲ್ಲೇ ಹರಿಯುತ್ತವೆ. ಧಾರ್ಮಿಕ ವೃತ್ತಿಗಾಯಕರು ಕಥೆಮಾಡಲು ಅಪೇಕ್ಷಿಸುವ ಯಾವ ವಿಧವಾದ ಕಟ್ಟುಪಾಡುಗಳನ್ನೂ ಇವರು ಬಯಸರು. ಕಡೆಯಲ್ಲಿ ಎತ್ತರವಾದ ಸ್ಥಳದಲ್ಲೋ ಜಗಲಿಯ ಮೇಲೋ ಚಪ್ಪರದಲ್ಲೋ ಕುಳಿತು ಕಥೆ ಮಾಡುತ್ತಾರೆ. ಕಥೆ ಮಾಡಲು ಕೊನೆಯ ಪಕ್ಷ ಮೂರು ಜನರಾದರೂ ಬೇಕು. ಪ್ರಧಾನ ಗಾಯಕನೊಡನೆ ಉಳಿದವರು ಸೊಲ್ಲು ಕೊಡುತ್ತಾರೆ. ಜೊತೆಗೆ ವಚನ ಬಂದಾಗ ಹೌದೌದು ಎಂದು ಹೇಳುತ್ತ ಕಥೆಯ ಬೆಳವಣಿಗೆಗೆ ಸ್ವಾರಸ್ಯ ತಂದು ಕೊಡುತ್ತಾರೆ. ಗುರುಶಿಷ್ಯ ಬಾಂಧವ್ಯವೂ ಧಾರ್ಮಿಕ ವೃತ್ತಿಗಾಯಕರಲ್ಲಿರುವಷ್ಟು ಗುರುತರವಾಗಿ ಇವರಲ್ಲಿ ಕಂಡುಬರುವುದಿಲ್ಲ.

ತಂಬೂರಿಯವರು ಹರಿಜನರ ಚಲುವಾದಿ ಹಾಗೂ ಹಣತರು ಎಂಬ ಉಪಜಾತಿಗೆ ಸೇರಿದವರು. ಇವರ ಮನೆದೇವರು ಕರಿಯಮ್ಮ, ಈ ದೇವತೆಯನ್ನು ಕುರಿತು ಕಥನಕಾವ್ಯ ಯಾವುದನ್ನೂ ಇವರು ಹಾಡುವಂತೆ ಕಾಣುವುದಿಲ್ಲ. ಆದರೆ ಈ ದೇವತೆಯನ್ನು ಕುರಿತ ತ್ರಿಪದಿಗಳನ್ನು ಹಾಡುತ್ತಾರೆ. ಕರಿಯಮ್ಮನನ್ನು ಇವರು ಲಕ್ಷ್ಮಿ ಎಂದು ಭಾವಿಸುತ್ತಾರೆ. ಇವರು ಉತ್ತರದ ಕಡೆಯಿಂದ ದಕ್ಷಿಣಕ್ಕೆ ಬಂದವರಂತೆ. ಬರುವ ದಾರಿಯಲ್ಲಿ ಕವಿಲೇದುರ್ಗದಿಂದ ಇವರ ಬೆನ್ನಹಿಂದೆಯೇ ಬಂದ ದೇವತೆಯಂತೆ ಕರಿಯಮ್ಮ, ಕರಿಯಮ್ಮನ ಹಬ್ಬವನ್ನು ಯುಗಾದಿ ಕಳೆದ ಹದಿನೈದನೆಯ ದಿನದಲ್ಲಿ ನಡೆಸುತ್ತಾರೆ. ಮಂಗಳವಾರ ತೇರಿಗೆ ಕಳಸಕಟ್ಟುತ್ತಾರೆ. ಬುಧವಾರ ಬೆಳಗ್ಗೆ ಪೂಜೆ ಮಾಡಿ, ಕುರಿ, ಕೋಳಿ, ಕೋಣಗಳ ಬಲಿ ಕೊಡುತ್ತಾರೆ. ಅದೇ ದಿನ ರಾತ್ರಿ ಕುದುರೆವಾಹನೋತ್ಸವ ನಡೆಸುತ್ತಾರೆ. ಉತ್ಸವದಲ್ಲಿ ಭಕ್ತರು ಬಾಯಿಬೀಗ ಹಾಕಿಕೊಂಡು ಹರಕೆ ಸಲ್ಲಿಸುತ್ತಾರೆ. ಗುರುವಾರ ತೇರು, ಸಿಡಿಯಾಡುವ ಪದ್ಧತಿಯೂ ಉಂಟು. ಕರಿಯಮ್ಮನ ಮಗ ಕೆಂಚರಾಯ. ಭೂತಾಳೆ ಮರದಲ್ಲಿ ಮಾಡಿರುವ ಕೆಂಚರಾಯನ ಮುಖವಾಡವನ್ನು ಒಬ್ಬ ತಲೆಗೆ ಕಟ್ಟಿಕೊಳ್ಳುತ್ತಾನೆ. ಅ ಸಂದರ್ಭದಲ್ಲಿ ಕೆಂಚರಾಯ ಮೈತುಂಬಿ ಬರುತ್ತಾನೆ. ಆಗ ಭಕ್ತರು ಕೋಳಿಗಳನ್ನು ಅವನ ಮುಂದೆ ಹಾರಬಿಡುತ್ತಾರೆ. ಕೆಂಚರಾಯ ಅವನ್ನು ಅಟ್ಟಾಡಿಕೊಂಡು ಹಿಡಿದು ಅವುಗಳ ಕುತ್ತಿಗೆಯನ್ನು ಕಚ್ಚಿ ರಕ್ತ ಹೀರಿ ಬಿಸಾಡುತ್ತಾನೆ. ಅವನೆಸೆದ ಕೋಳಿಗಳನ್ನು ಅಡಿಗೆ ಮಾಡಿ ಪ್ರಸಾದವೆಂದು ಜನ ಭಕ್ತಿಯಿಂದ ಸೇವಿಸುತ್ತಾರೆ. ಕರಿಯಮ್ಮ, ಕೆಂಚರಾಯರಲ್ಲದೆ ದೂತರಾಯ, ಕೆಂಪಮ್ಮ ಎಂಬ ದೇವತೆಗಳನ್ನೂ ಇವರು ಆರಾಧಿಸುತ್ತಾರೆ. ಆದರೂ ಇವನಿಗೆ ಇಷ್ಟೇ ದೇವತೆಗಳು ಸಾಲವು. ಶಿವ, ವಿಷ್ಣು, ಮುಂತಾದ ವೈದಿಕ ದೇವತೆಗಳಿಗೂ ಇವರು ಮೊರೆಹೋಗುತ್ತಾರೆ.

ಕರಿಯಮ್ಮನ ಹಬ್ಬವಲ್ಲದೇ ಮಳದಮಸಿ ಹಬ್ಬ. ಮೇಟಿ ಹಬ್ಬ ಮತ್ತು ನೂಲು ಹಬ್ಬ ಎಂಬ ಹಬ್ಬಗಳನ್ನು ಇವರು ಆಚರಿಸುತ್ತಾರೆ. ಮಳದಮಸಿ ಹಬ್ಬ ಪಿತೃಪೂಜೆಗೆ ಸಂಬಂಧಿಸಿದ್ದು. ಸತ್ತು ಕೆಟ್ಟವರಿಗೆ ಈ ಹಬ್ಬದಲ್ಲಿ ಅನ್ನ ಹಾಕುತ್ತಾರೆ. ಮಗನಮಾರಿ ಮಳದಮಸಿ ಹಬ್ಬ ಮಾಡು - ಎನ್ನುವ ಇವರಲ್ಲಿರುವ ಗಾದೆ ಪಿತೃ ಪೂಜೆಯ ಪ್ರಾಧಾನ್ಯವನ್ನು ಎತ್ತಿತೋರಿಸುತ್ತದೆ. ಆದ್ದರಿಂದ ಯಾವ ಹಬ್ಬವನ್ನೂ ಆಚರಿಸದೆ ಇದ್ದರೂ ಈ ಹಬ್ಬವನ್ನು ಕಡ್ಡಾಯವಾಗಿ ಆಚರಿಸುತ್ತಾರೆ. ಗೌರೀ ಹಬ್ಬದ ಅನಂತರದ ಅಮಾವಾಸ್ಯೆಯ ದಿನದಂದು ಈ ಹಬ್ಬ ಬರುತ್ತದೆ. ಅಂದು ಮನೆಮಠಗಳನ್ನೆಲ್ಲ ಗುಡಿಸಿ ಸಾರಿಸಿ ಮಿಂದು ಮಡಿ ಮಾಡಿಕೊಂಡು ಐದು ಕೊಡಪಾನದ ತುಂಬ ನೀರು ತುಂಬಿ ಹೊಸ ಬಟ್ಟೆಗಳ ಮೇಲೆ ಕಳಸದಂತಿರಿಸಿ, ಮನೆಯಲ್ಲಿ ಮಾಡಿದ ಅಡುಗೆಯನ್ನೆಲ್ಲ ಎಡೆಮಾಡಿ ಪೂಜಿಸುತ್ತಾರೆ. ಸತ್ತವರೆಲ್ಲ ಬಂದು ಎಡೆಯನ್ನು ಸ್ವೀಕರಿಸಿದರೆಂದು ನಂಬುತ್ತಾರೆ.

ನೂಲು ಹಬ್ಬ ಮಳೆಪುರಾಣದ ಹಿನ್ನೆಲೆಯಲ್ಲಿ ಆಚರಣೆಗೆ ಬಂದಿರುವಂತೆ ಕಾಣುತ್ತದೆ. ಯಾವ ಮಳೆ ಹುಸುದ್ರೂ ಅಸ್ಲೆ ಮಳೆ ನಾನು ಹುಸಿಯಾಕಿಲ್ಲ - ಎಂಬುದಾಗಿ ಆಶ್ಲೇಷ ಮಳೆ ರೈತರಿಗೆ ಭರವಸೆ ಕೊಟ್ಟಿತಂತೆ. ಆದ್ದರಿಂದ ಈ ಮಳೆ ಪ್ರಾರಂಭವಾಗುವ ದಿನ ಇಲ್ಲವೇ ಈ ಮಳೆಯ ಅವಧಿಯಲ್ಲಿ ಬರುವ ಹುಣ್ಣಿಮೆಯ ದಿನ ನೂಲಿನ ಹಬ್ಬ ನಡೆಸುತ್ತಾರೆ. ಅಂದು ಗ್ರಾಮದೇವತೆಗೆ ಪೂಜೆ ಮಾಡಿಸಿ ಕಾಣಿಕೆ ಸಲ್ಲಿಸಿ ಪೂಜಾರಿಯ ಕೈಯಿಂದ ಹಸಿನೂಲನ್ನು ತಮ್ಮ ಮುಂಗೈಗೆ ಕಟ್ಟಿಸಿಕೊಳ್ಳುತ್ತಾರೆ.

ಸಂಕ್ರಾಂತಿ ಹಬ್ಬವನ್ನು ಇವರು ಮೇಟಿಹಬ್ಬ ಎಂದು ಕರೆಯುತ್ತಾರೆ. ಕಣದಲ್ಲಿರುವ ಮೇಟಿಯ ಸುತ್ತ ಗುಡಿಸಿ, ಸಾರಿಸಿ, ರಂಗೋಲಿಯಿಕ್ಕಿ ಕವುಂಟಕಾಯಿ, ಉತ್ರಾಣಿಕಡ್ಡಿ, ಬೈನೆ ಹನೆಗಳಿಂದ ಮೇಟಿಯನ್ನು ಶೃಂಗರಿಸಿ ಅರಿಶಿನ, ಕುಂಕುಮ, ವಿಭೂತಿಗಳನ್ನು ಹಚ್ಚಿ ಹಾಲು, ಅನ್ನ, ಕಡಬುಗಳನ್ನು ಎಡೆಮಾಡಿ ಪೂಜಿಸುತ್ತಾರೆ. 

ತಂಬೂರಿಯವರ ಅಚಾರವಿಚಾರಗಳಲ್ಲಿಯೂ ವೈಶಿಷ್ಟ್ಯವಿದೆ. ಹುಟ್ಟಿದ ಮಕ್ಕಳಿಗೆ ಯಾವ ಹೆಸರನ್ನಿಡಬೇಕೆಂಬುದನ್ನು ಇವರು ಜೋಯಿಸರಿಂದ ತಿಳಿದುಕೊಳ್ಳುತ್ತಾರೆ. ಮಗು ಹುಟ್ಟಿದ ಹನ್ನೆರಡನೆಯ ದಿನದಲ್ಲಿ ಮನೆಮಠ ಸಾರಿಸಿ, ಮಡಿ ಮಾಡಿಕೊಂಡು ಜೋಯಿಸರೆ ಮನೆಗೆ ಹೋಗುತ್ತಾರೆ. ಜೋಯಿಸರು ಮಂತ್ರಿಸಿದ ತೀರ್ಥವನ್ನುಕೊಟ್ಟು ಮಗುವಿಗೆ ಯಾವ ಹೆಸರಿಡಬೇಕೆಂದು ಸೂಚಿಸುತ್ತಾರೆ. ತಂದ ತೀರ್ಥವನ್ನು ಮಾಡಿದ ಅಡಿಗೆಯ ಪದಾರ್ಥಗಳ ಮೇಲೆಲ್ಲ ಚಿಮುಕಿಸುತ್ತಾರೆ. ಮಗುವಿಗೆ ಸ್ನಾನ ಮಾಡಿಸಿ, ತೊಟ್ಟಿಲಿಗೆ ಪೂಜೆಮಾಡಿ ಮುತ್ತೈದೆಯರು ಮಗುವನ್ನು ತೊಟ್ಟಿಲಲ್ಲಿ ಮಲಗಿಸುತ್ತಾರೆ. ಬಂಧುಬಳಗದವರೆಲ್ಲ ಒಂದು ತಟ್ಟೆ ಅಕ್ಕಿಯನ್ನು ಒಂದೊಂದು ರೂಪಾಯಿಯನ್ನು ತಂದು ಬಾಣಂತಿ ಮುಂದೆ ಹಾಸಿರುವ ಬಟ್ಟಗೆ ಸುರಿಯುತ್ತಾರೆ. ಇದಕ್ಕೆ ಬೊಕ್ಕಲಕ್ಕಿ ಎಂದು ಹೆಸರು. ಬೊಕ್ಕಲಕ್ಕಿಯಲ್ಲಿ ಗಂಜಿ ಮಾಡಿ ಅದರೊಂದಿಗೆ ಬೈನೆದಿಂಡು, ಕಡಲೆಕಾಳು, ಉಪ್ಪು ಹಾಕಿ ಎಸರು ತಯಾರಿಸುತ್ತಾರೆ. ಒರಳುಕಲ್ಲನ್ನು ತೊಳೆದು ಅದರ ಮುಂದೆ ಮಾಡಿದ ಈ ಅಡಿಗೆಯನ್ನು ಬಾಣಂತಿಯ ಬಟ್ಟೆಗಳೊಡನೆ ಇಡುತ್ತಾರೆ. ಅದರ ಮುಂದೆ ಮಗುವನ್ನು ಕುಳ್ಳಿರಿಸಿ, ಪೂಜೆಮಾಡಿ ಒಂದು ನಿಮಿಷದ ಕಾಲ ಮಗುವೊಂದನ್ನೇ ಒಳಗೆ ಬಿಟ್ಟು ಎಲ್ಲರೂ ಹೊರಕ್ಕೆ ಬಂದು ಬಿಡುತ್ತಾರೆ. ಅನಂತರ ಒಳಕ್ಕೆ ಬಂದು ಮಗುವಿಗೆ ಬೊಕ್ಕಲಕ್ಕಿ ಹಾಕಿದೆವೆಂದು ಹೇಳಿ ಬಾಣಂತಿಗೆ ಗಂಜಿಯನ್ನು ಕುಡಿಸುತ್ತಾರೆ.

ಹೆಣ್ಣು ಋತುವಾದಾಗ ಐದು ದಿನಗಳವರೆಗೆ ಅವಳನ್ನು ಕೊಟ್ಟಿಗೆಯಲ್ಲಿರಿಸುತ್ತಾರೆ. ನಿತ್ಯ ಸ್ನಾನ ಮಾಡಿಸುತ್ತಾರೆ. ಐದನೆಯ ದಿನ ನೀರು ಹೊಯ್ದು ಜಗಲಿ ಮೇಲೆ ಕರೆದೊಯ್ದುಕೊಳ್ಳುತ್ತಾರೆ. ಹನ್ನೆರಡು ದಿನಗಳವರೆಗೆ ಆಕೆ ಗಂಡಸರ ಮುಖ ನೋಡುವಂತಿಲ್ಲ. ಹನ್ನೆರಡನೆಯ ದಿನ ನೀರು ಹಾಕಿ ಹೊಸ ನೀರೆ ಉಡಿಸಿ ಶೃಂಗಾರ ಮಾಡಿಸಿ ಗಂಗೆಪೂಜೆ ಮಾಡಿಸುತ್ತಾರೆ. ತಂಬಿಗೆಯಲ್ಲಿ ತುಂಬಿದ ಗಂಗೆಯನ್ನು ಆಕೆ ಹೊತ್ತುಕೊಂಡು ಹೋಗಿ ಹಲಸಿನ ಮರಕ್ಕೆ ಎರೆದು ಬರುತ್ತಾಳೆ. ಮನೆಗೆ ಬಂದ ಮೇಲೆ ಬಂಧು ಬಳಗವೆಲ್ಲ ಬೊಕ್ಕಲಕ್ಕಿ, ಉಡುಗೊರೆಗಳನ್ನು ಕೊಡುತ್ತಾರೆ.

ಮದುವೆ ವಿಚಾರದಲ್ಲಿ, ಗಂಡು ಹೆಣ್ಣು ಯಾರೆಂಬುದು ಗೊತ್ತಾದ ಮೇಲೆ ಲಗ್ನ ಕಟ್ಟಿಸುವ ಕಾರ್ಯ ನಡೆಯುತ್ತದೆ. ಅಂದು ಗಂಡಿನ ಕಡೆಯವರು ಸೀರೆ, ರವಿಕೆ, ಎಲೆಅಡಿಕೆ, ಹೂವು, ಹಣ್ಣು, ಕಡಗ, ಕಜ್ಜಾಯಗಳೊಡನೆ ಹೆಣ್ಣಿನ ಮನೆಗೆ ಬರುತ್ತಾರೆ. ಹೆಣ್ಣನ್ನು ಹಸೆ ಕೂರಿಸಿ ಬೊಕ್ಕಲಕ್ಕಿ ಹುಯ್ದ ಮೇಲೆ ಜೋಯಿಸರು ಲಗ್ನ ಬರೆದುಕೊಡುತ್ತಾರೆ. ಮದುವೆ ಐದು ದಿನವಿದೆಯೆಂದಾಗ ನೆಂಟರಿಷ್ಟರು ತಮ್ಮ ತಮ್ಮ ಮನೆಗಳಲ್ಲಿ ಹೆಣ್ಣುಗಂಡುಗಳನ್ನು ಹಸೆಕೂರಿಸಿ ಮುಯ್ಯಿ ಮಾಡುತ್ತಾರೆ. ಮದುವೆಗೆ ಮುಂಚೆ ಮೂರು ದಿನಗಳಿರುವಾಗ ಗಂಡು ಯಾವುದೇ ಕಾರಣದಿಂದಲೂ ಹೊರಗಡೆ ಹೋಗುವಂತಿಲ್ಲ. ನಾಳೆ ಧಾರೆ ಎನ್ನುವಾಗ ಗಂಡಿನ ಮನೆ ಚಪ್ಪರದೂಟವಾಗುತ್ತದೆ. ಹೆಣ್ಣಿನ ಮನೆಗೆ ಬಂದ ಗಂಡನ್ನು ಆರತಿ ಬೆಳಗಿ ಕರೆತಂದು ಹೊರಚಪ್ಪರದಲ್ಲಿ ಕೂರಿಸುತ್ತಾರೆ. ಧಾರೆ ನಿಲ್ಲಿಸುತ್ತಾರೆ. ಹಾಲಿನ ತಂಬಿಗೆಗೆ ತಾಳಿ ಕಟ್ಟಿ ಹತ್ತಾರು ಜನ ಹಿರಿಯರ ಕೈ ಮುಟ್ಟಿಸಿ, ತಂದು ಶುಭಮುಹೂರ್ತದಲ್ಲಿ ಮಾಂಗಲ್ಯಧಾರಣೆ ಮಾಡಿಸುತ್ತಾರೆ. ಹಾಲುತುಪ್ಪ ಬಿಡುತ್ತಾರೆ. ಆಮೇಲೆ ಹಸೆ, ಅನಂತರ ಮುಯ್ಯಿ, ಆಮೇಲೆ ಹೊಳೆಶಾಸ್ತ್ರ, ಗಂಡು ಹೆಣ್ಣು ಇಬ್ಬರೂ ಹೊಳೆದಡಕ್ಕೆ ಬಂದು ಎರಡು ತಂಬಿಗೆ ನೀರನ್ನು ಮೊಗೆದು ಕಳಸ ಮಾಡಿ ಗಂಗೆಯನ್ನು ಪೂಜಿಸುತ್ತಾರೆ. ಇದು ಕೇಲಿನ ಪೂಜೆ. ಇಬ್ಬರೂ ಒಂದೊಂದು ಕಳಸವನ್ನು ಹೊತ್ತುತಂದು ಹಲಸಿನ ಮರಕ್ಕೆ ಬಿಡುತ್ತಾರೆ. ಇದಾದ ಮೇಲೆ ಗಂಡಿನ ಮನೆಗೆ ಹೆಣ್ಣನ್ನು ಕಳಿಸಿಕೊಡುತ್ತಾರೆ. ಆಗ ಹೆಣ್ಣಿನ ಮನೆಯವರು ಒಂದು ಹೆಡಿಗೆಯಲ್ಲಿ ಕಂಚಿನ ಗಂಗಳ, ಚೆಂಬು, ಬಟ್ಟಲು, ಕುಡುಗೋಲು - ಮುಂತಾದ ನಿತ್ಯಬಳಕೆಯ ವಸ್ತುಗಳ ಜೊತೆಗೆ ಹಾಸಲು ಹೊದೆಯಲು ಬೇಕಾದ ವಸ್ತುಗಳನ್ನು ಕುಳವಾಡಿ ತಲೆಯ ಮೇಲೆ ಹೊರಿಸಿ ಕಳಿಸಿಕೊಡುತ್ತಾರೆ.

ಶವಸಂಸ್ಕಾರಾದಿ ಕ್ರಿಯೆಗಳೂ ಇವರಲ್ಲಿ ತೀರ ವಿಚಿತ್ರವಾಗಿರುವುದನ್ನು ನೋಡಬಹುದು. ಹೆಣವನ್ನು ಕೈಕಾಲು ಮುರಿದು ಮಲಗಿಸಿ ಅದರ ಎದೆಯ ಮೇಲೆ ಕುಡುಗೋಲಿಡುತ್ತಾರೆ. ತಲೆದೆಸೆಗೆ ಹರಳೆಣ್ಣೆ ದೀಪಹಚ್ಚಿಡುತ್ತಾರೆ. ಹೆಣಕ್ಕೆ ನೀರು ಹೊಯ್ದು ಬಟ್ಟೆಬರೆ ಉಡಿಸಿ ಬಾಯಿಗೆ ತಾಂಬೂಲ, ಚಿನ್ನ ಬೆಳ್ಳಿ ಚೂರುಗಳನ್ನು ತುಂಬುತ್ತಾರೆ. ಹೆಣವನ್ನು ಗೋಡೆಗೆ ಒರಗಿಸಿ ಕುಳ್ಳಿರಿಸುತ್ತಾರೆ. ಸತ್ತವನ ಹೆಂಡತಿಗೆ ಹೊಸ ಸೀರೆ ರವಿಕೆ ತೊಡಿಸಿ ಹೆಣದ ಪಕ್ಕದಲ್ಲಿ ಹಸೆಕೂರಿಸುತ್ತಾರೆ. ಮಡಿಲಕ್ಕಿ ತುಂಬುತ್ತಾರೆ. ಆಮೇಲೆ ಹೆಣವನ್ನು ಕುರಾಜಿನ ಮೇಲೆ ಕುಳ್ಳಿರಿಸಿ ಅಕ್ಕಿ ಹಾಗೂ ಪುರಿಯನ್ನು ಹೆಣದ ಮೇಲೆರಚುತ್ತ ಹೊತ್ತು ತರುತ್ತಾರೆ. ಇತರ ಜಾತಿಗಳಂತೆ ಹಿಂಡೆಕೂಳು ಹಾಕುವ ಪದ್ಧತಿ ಇವರಲ್ಲಿಲ್ಲ. ಆದರೆ ಹಿರಿಯ ಮಗ ತಲೆಗೊಳ್ಳಿ ಎಂಬ ಹೆಸರಿನ ಪಂಜನ್ನು ಹಿಡಿದುಕೊಂಡು ಹೆಣದ ಮುಂದೆ ಬರುತ್ತಾನೆ.  ಗುಂಡಿಪೂಜೆ ಮಾಡಿ ಸುತ್ತ ವಿಭೂತಿ ಪಟ್ಟೆ ಬರೆದು ಹೆಣವನ್ನು ಹೊಸ ಬಟ್ಟೆಯಲ್ಲಿ ಮುಚ್ಚಿ ಪಂಜು ಹಿಡಿದಿರುವ ಮಗನಿಂದ ಮೊದಲು ಮಣ್ಣನ್ನು ಸುರಿಸುತ್ತಾರೆ. ಅಲ್ಲಿಂದ ಮನೆಗೆ ಬಂದು ಸತ್ತ ಸ್ಥಳದಲ್ಲಿ ದೀಪ ಹಚ್ಚಿಟ್ಟಿರುತ್ತಾರೆ. ಬಂದವರು ಕೈಕಾಲು ತೊಳೆದುಕೊಂಡು ದೊಡ್ಲೀಕಾಯಿಯ ಹುಳಿಯಲಿ ಅದ್ದಿಕೊಂಡು ದೀಪಕ್ಕೆ ಕೈ ಮುಗಿದು ತಮ್ಮ ತಮ್ಮ ಮನೆಗೆ ಹೋಗುತ್ತಾರೆ. ಸತ್ತ ಹನ್ನೆರಡೆನೆಯ ದಿನಕ್ಕೆ ತಿಥಿ ಮಾಡುತ್ತಾರೆ. ತಿಥಿ ಮಾಡುವುದರಿಂದ ಸತ್ತವರಿಗೆ ಸ್ವರ್ಗಪ್ರಾಪ್ತಿಯಾಗುತ್ತದೆಯೆಂಬ ನಂಬಿಕೆ ಇವರಿಗಿದೆ. ತಿಥಿಯಲ್ಲಿ ಹನ್ನೆರಡು ಎಡೆ ಇಡುತ್ತಾರೆ. ಈ ಹನ್ನೆರಡು ಎಡೆಗಳು ಸತ್ತವನ ಕೈ ಕಾಲು ಎದೆ ತಲೆ ಕಣ್ಣು ಕಿವಿ ಬೆನ್ನು ಮೂಗು ಬಾಯಿ ಹೊಟ್ಟೆ ಲಿಂಗ ಮತ್ತು ಅಂಡು ಈ ಹನ್ನೆರಡು ಅವಯವಗಳಿಗೆ, ಸತ್ತವನ ಹೆಸರಿನಲ್ಲಿ ಕಳಸ ಪೂಜಿಸಿ ಮಾಂಸದಡುಗೆಯನ್ನೂ ಎಡೆಮಾಡುತ್ತಾರೆ.

ಬಸುರಿ ಹೆಂಗಸನ್ನು ಗಂಡನ ಮನೆಯಿಂದ ತವರಿಗೆ ಕಳಿಸುವಾಗ ಗಂಗೆಪೂಜೆ ಮಾಡಿ ಗಂಗೆಗೆ ಬಾಗಿನ ಬಿಡುವ ಪದ್ಧತಿಯೂ ಇವರಲ್ಲಿ ಇದೆ.

ಹರಿಜನರಲ್ಲಿ ವಿಶಿಷ್ಟ ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿರುವ ಚಲುವಾದಿಗಳನ್ನೂ ಹಣತರನ್ನೂ ಮಾನವಶಾಸ್ತ್ರೀಯ ದೃಷ್ಟಿಯಿಂದ ಸರ್ವೇಕ್ಷಣ ಮಾಡುವ ಅಗತ್ಯವಿದೆ.

ತಂಬೂರಿಯವರು ವೃತ್ತಿಗಾಯಕರಾಗಿ ವಿಶಿಷ್ಟ ಸಂಪ್ರದಾಯಕ್ಕೆ ಸೇರಿದವರಾಗಿರುವುದರ ಜೊತೆಗೆ ಊರೊಟ್ಟಿನ ಮದುವೆಮುಂಜಿಗಳಲ್ಲಿ ವಾದ್ಯವನ್ನೂ ನುಡಿಸುತ್ತಾರೆ. ಇವರ ಚಿಟ್ ಮೇಳವೆಂಬುದು ಕರಡೆ ಡೋಲು, ಡುಮ್ಕಿ, ಮೋರಿಗೆಗಳಿಂದ ಕೂಡಿದ ಜನಪದ ನೃತ್ಯ.	
	
(ಪಿ.ಕೆ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ